ಫ್ರೀಟೌನ್ - 
ಸಿಯೆರಾ ಲಿಯೋನ್ ಗಣರಾಜ್ಯದ ರಾಜಧಾನಿ. ಅಟ್ಲಾಂಟಿಕ್ ಸಾಗರಕ್ಕೆ ಚಾಚಿಕೊಂಡಿರುವ ಸಿಯರ ಲಿಯೋನ್ ಪರ್ಯಾಯ ದ್ವೀಪದಲ್ಲಿರುವ ದೊಡ್ಡ ಬಂದರು ನಗರ.  ಜನಸಂಖ್ಯೆ 5,00,000(1980).  ಸಿಯೆರಾ ಲಿಯೋನ್ ನದಿ ಮುಖದ ಬಳಿ ಇರುವ ಈ ಪಟ್ಟಣವನ್ನು 1787ರಲ್ಲಿ ಸ್ಥಾಪಿಸಲಾಯಿತು.  1893ರಲ್ಲಿ ಪೌರಾಡಳಿತ ಪಟ್ಟಣವೆಂದು ಪರಿಗಣಿಸಲಾಯಿತು.  1961ರಿಂದ ರಾಷ್ಟ್ರದ ರಾಜಧಾನಿಯಾಯಿತು.  ಮುಖ್ಯ ಆಡಳಿತ ಕೇಂದ್ರವಾಗಿರುವ ಈ ಪಟ್ಟಣದ ಬಳಿ ಉತ್ತಮ ಬಂದರಿದ್ದು ನಗರದ ಹೆಚ್ಚು ಮಂದಿ ವರ್ತಕರು ಆಮದು ರಫ್ತು ಉದ್ಯಮದವರಾಗಿದ್ದಾರೆ ವಜ್ರ ಕತ್ತರಿಸುವುದು, ರೈಲ್ವೆ ವರ್ಕ್‍ಷಾಪ್, ಅಕ್ಕಿಗಿರಣಿ, ಮತ್ಸೋದ್ಯಮ ಬಿಟ್ಟರೆ ಬೇರೆ ಕೈಗಾರಿಕೆಗಳು ಇನ್ನೂ ಅಭಿವೃದ್ಧಿಯಾಗಬೇಕಾಗಿದೆ. ಇಲ್ಲಿಂದ ಮುಖ್ಯವಾಗಿ ಪಾಮ್ ಎಣ್ಣೆ, ಕೋಕೊ, ಕಾಫಿ, ಶುಂಠಿ ಮತ್ತು ಕೋಲಬೀಜಗಳು ರಫ್ತಾಗುತ್ತದೆ. ಪಟ್ಟಣದ ಆಗ್ನೇಯದಲ್ಲಿ 16ಕಿಮೀ ದೂರದಲ್ಲಿ ಹೇಸ್ಟಿಂಗ್ಸ್ ವಿಮಾನ ನಿಲ್ದಾಣವೂ ಅಂತರರಾಷ್ಟ್ರೀಯ ಲುಂಗಿ ವಿಮಾನ ನಿಲ್ದಾಣವೂ ಇದ್ದು ರಾಷ್ಟ್ರೀಯ ಅಂತರರಾಷ್ಟ್ರೀಯ ನಗರಗಳೊಡನೆ ಸಂಪರ್ಕವಿದೆ. ವಿವಿಧ ಶಾಲಾ ಕಾಲೇಜುಗಳೂ ಮಸೀದಿ ಮತ್ತು ಚರ್ಚ್‍ಗಳೂ ಚರಿತ್ರಾರ್ಹ ದಾಖಲೆಗಳಿರುವ ವಸ್ತು ಸಂಗ್ರಹಾಲಯವೂ ಇವೆ.      
								        *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ